Daniel 10

ದೇವದೂತನ ದರ್ಶನ

1ಪಾರಸಿಯ ರಾಜನಾದ ಕೋರೆಷನ ಆಳ್ವಿಕೆಯ ಮೂರನೆಯ ವರುಷದಲ್ಲಿ ಬೇಲ್ತೆಶಚ್ಚರನೆಂಬ ದಾನಿಯೇಲನಿಗೆ ಒಂದು ಸಂಗತಿಯು ಪ್ರಕಟವಾಯಿತು; ಅದು ಮಹಾಹೊರಾಟದ ಸಂಗತಿ ಸತ್ಯವಾದಸಂಗತಿ; ಅವನು ಕಂಡ ಕನಸನ್ನು ಗಮನಿಸಿ ಆ ಸಂಗತಿಯನ್ನು ಮನದಟ್ಟು ಮಾಡಿಕೊಂಡನು.

2ಆ ಕಾಲದಲ್ಲಿ ದಾನಿಯೇಲನಾದ ನಾನು ಮೂರು ವಾರ ಶೋಕಿಸುತ್ತಿದ್ದೆನು. 3ಮೂರು ವಾರ ಮುಗಿಯುವ ತನಕ ನಾನು ರುಚಿಪದಾರ್ಥವನ್ನು ತಿನ್ನಲಿಲ್ಲ. ಮಾಂಸವನ್ನೂ, ದ್ರಾಕ್ಷಾರಸವನ್ನೂ ನನ್ನ ಬಾಯಿಗೆ ಹಾಕಲಿಲ್ಲ. ಎಣ್ಣೆಯನ್ನು ಹಚ್ಚಿಕೊಳ್ಳಲಿಲ್ಲ.

4ಮೊದಲನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ನಾನು ಹಿದ್ದೆಕೆಲೆಂಬ 5ಟೈಗ್ರಿಸ್ ಮಹಾನದಿಯ ದಡದ ಮೇಲೆ ಇದ್ದು ಕಣ್ಣೆತ್ತಿ ನೋಡಲು ಇಗೋ, ನಾರಿನ ಬಟ್ಟೆಯನ್ನು ಹೊದ್ದುಕೊಂಡು ಊಫಜಿನ ಅಪರಂಜಿಯ ಪಟ್ಟಿಯನ್ನು ಸೊಂಟಕ್ಕೆ ಬಿಗಿದುಕೊಂಡ ಒಬ್ಬ ಪುರುಷನು ನನಗೆ ಕಾಣಿಸಿದನು; 6ಅವನ ಶರೀರವು ಪೀತರತ್ನದ ಹಾಗೆ ಕಂಗೊಳಿಸಿತು, ಅವನ ಮುಖವು ಮಿಂಚಿನಂತೆ ಹೊಳೆಯಿತು, ಅವನ ಕಣ್ಣುಗಳು ಉರಿಯುವ ಪಂಜುಗಳೋಪಾದಿಯಲ್ಲಿ ನಿಗಿನಿಗಿಸಿದವು, ಅವನ ಕೈಕಾಲುಗಳು ಬೆಳಗಿದ ತಾಮ್ರದ ಹಾಗೆ ಥಳಥಳಿಸಿದವು, ಅವನ ಮಾತಿನ ಶಬ್ದವು ಸಂದಣಿಯ ಕೋಲಾಹಲದಂತೆ ಕೇಳಿಸಿತು.

7ದಾನಿಯೇಲನಾದ ನಾನೊಬ್ಬನೇ ಆ ದರ್ಶನವನ್ನು ಕಂಡೆನು; ನನ್ನೊಂದಿಗಿದ್ದವರು ಅದನ್ನು ಕಾಣಲಿಲ್ಲ; ದೊಡ್ಡ ನಡುಕವು ಅವರನ್ನು ಹಿಡಿಯಿತು, ಓಡಿ ಹೋಗಿ ಅವಿತುಕೊಂಡರು. 8ನಾನು ಏಕಾಂಗಿಯಾಗಿ ಉಳಿದು ಆ ಅದ್ಭುತ ದರ್ಶನವನ್ನು ಕಂಡು ಶಕ್ತಿಯನ್ನೆಲ್ಲಾ ಕಳೆದುಕೊಂಡೆನು, ನನ್ನ ಗಾಂಭೀರ್ಯವು ಹಾಳಾಯಿತು, ನಾನು ನಿತ್ರಾಣನಾದೆನು. 9ಆದರೂ ಅವನು ಮಾತನಾಡುವ ಶಬ್ದವನ್ನು ಕೇಳಿದೆನು; ಅವನ ಮಾತಿನ ಶಬ್ದವು ನನ್ನ ಕಿವಿಗೆ ಬಿದ್ದಾಗ ನಾನು ಮೈಮರೆತು ಬೋರಲು ಬಿದ್ದಿದ್ದೆನು.

10ಆಹಾ, ನನಗೆ ಹಸ್ತಸ್ಪರ್ಶವಾಯಿತು; ನಾನು ಗಡಗಡನೆ ನಡುಗುತ್ತಾ ಮೊಣಕಾಲೂರಿ ಅಂಗೈಗಳ ಮೇಲೆ ನಿಲ್ಲುವಂತೆ ಮಾಡಿತು. 11ಆಗ ಅವರು ನನಗೆ, <<ದಾನಿಯೇಲನೇ, ಅತಿಪ್ರಿಯನೇ, ನಾನು ನುಡಿಯುವ ಮಾತುಗಳನ್ನು ಗ್ರಹಿಸು; ನಿಂತುಕೋ, ಈಗ ನಿನ್ನ ಬಳಿಗೇ ಕಳುಹಿಸಲ್ಪಟ್ಟಿದ್ದೇನೆ>> ಎಂದು ಹೇಳಿದನು. ಹೇಳಿದ ಕೂಡಲೆ ನಾನು ನಡುಗುತ್ತಾ ನಿಂತುಕೊಂಡೆನು.

12ಆ ಮೇಲೆ ಅವನು ನನಗೆ, <<ದಾನಿಯೇಲನೇ, ಭಯಪಡಬೇಡ, ನೀನು ದೈವಸಂಕಲ್ಪವನ್ನು ವಿಮರ್ಶಿಸುವುದಕ್ಕೂ, ನಿನ್ನನ್ನು ನಿನ್ನ ದೇವರ ಮುಂದೆ ತಗ್ಗಿಸಿಕೊಳ್ಳುವುದಕ್ಕೂ ಮನಸ್ಸಿಟ್ಟ ಮೊದಲನೆಯ ದಿನದಲ್ಲಿಯೇ ನಿನ್ನ ವಿಜ್ಞಾಪನೆಯು ದೇವರಿಗೆ ಮುಟ್ಟಿತು; ಆ ವಿಜ್ಞಾಪನೆಯ ನಿಮಿತ್ತವೇ ನಾನು ಬಂದೆನು. 13ಪಾರಸಿಯ ರಾಜ್ಯದ ದಿವ್ಯಪಾಲಕನು ಇಪ್ಪತ್ತೊಂದು ದಿನ ನನ್ನನ್ನು ತಡೆಯಲು ಇಗೋ, ಪ್ರಧಾನ ದಿವ್ಯಪಾಲಕರಲ್ಲೊಬ್ಬನಾದ ಮೀಕಾಯೇಲನು ನನ್ನ ಸಹಾಯಕ್ಕೆ ಬಂದನು; ಅಲ್ಲಿ ಪಾರಸಿಯ ರಾಜರ ಸಂಗಡ ಹೋರಾಡಿ,

14ಉಳಿದು ಅಂತ್ಯಕಾಲದಲ್ಲಿ ನಿನ್ನ ಜನರಿಗಾಗುವ ಗತಿಯನ್ನು ನಿನಗೆ ತಿಳಿಸುವುದಕ್ಕೋಸ್ಕರ ಬಂದೆನು; ಆ ಕಾಲದ ಸಂಗತಿಯನ್ನು ವ್ಯಕ್ತಪಡಿಸುವ ಇನ್ನೊಂದು ದರ್ಶನವುಂಟು>> ಎಂದು ಹೇಳಿದನು. 15ಅವನು ಈ ಮಾತುಗಳನ್ನು ನನಗೆ ಹೇಳಿದ ಕೂಡಲೆ ನಾನು ಮುಖವನ್ನು ತಗ್ಗಿಸಿಕೊಂಡು ಬಾಯಿಬಿಡಲಾರದೆ ಹೋದೆನು.

16ಇಗೋ, ನರರೂಪ ಸದೃಶನೊಬ್ಬನು ನನ್ನ ತುಟಿಗಳನ್ನು ಮುಟ್ಟಲು ನಾನು ಬಾಯಿಬಿಟ್ಟು ನನ್ನ ಮುಂದೆ ನಿಂತಿರುವವನಿಗೆ, <<ಎನ್ನೊಡೆಯನೇ, ಈ ದರ್ಶನದಿಂದ ವೇದನೆಗಳು ನನ್ನನ್ನು ಆಕ್ರಮಿಸಿವೆ, ನಿತ್ರಾಣನಾಗಿದ್ದೇನೆ. 17ಎನ್ನೊಡೆಯನ ಸೇವಕನಾದ ನನ್ನಂಥವನು ಎನ್ನೊಡೆಯನಾದ ನಿನ್ನಂಥವನ ಸಂಗಡ ಹೇಗೆ ಮಾತನಾಡಬಹುದು? ಈಗಿನಿಂದ ಶಕ್ತಿಯನ್ನೆಲ್ಲಾ ಕಳಕೊಂಡವನಾಗಿದ್ದೇನೆ, ನನ್ನಲ್ಲಿ ಉಸಿರೇ ಇಲ್ಲ>> ಎಂದು ಹೇಳಿದೆನು.

18ಮನುಷ್ಯ ಸದೃಶನು ಪುನಃ ನನ್ನನ್ನು ಮುಟ್ಟಿ ಬಲಪಡಿಸಿದನು. 19ಆ ಮೇಲೆ ಆ ಪುರುಷನು ನನಗೆ, <<ಅತಿಪ್ರಿಯನೇ, ಭಯಪಡಬೇಡ; ನಿನಗೆ ಸಮಾಧಾನವಿರಲಿ, ಬಲಗೊಳ್ಳು, ಬಲಗೊಳ್ಳು>> ಎಂದು ಹೇಳಿದನು. ಅವನು ಈ ಮಾತನ್ನು ಹೇಳಿದ ಕೂಡಲೆ ನಾನು ಬಲಗೊಂಡು, <<ಎನ್ನೊಡೆಯನೇ, ಮಾತನಾಡು; ನನ್ನನ್ನು ಬಲಗೊಳಿಸಿದ್ದೀ>>

20ಎಂದು ಅರಿಕೆಮಾಡಲು ಅವನು ನನಗೆ ಹೀಗೆ ಹೇಳಿದನು, <<ನಾನು ನಿನ್ನ ಬಳಿಗೆ ಏಕೆ ಬಂದೆನೆಂಬುದು ನಿನಗೆ ಗೊತ್ತಲ್ಲವೆ; ಈಗ ನಾನು ಪಾರಸಿಯ ರಾಜ್ಯದ ದಿವ್ಯ ಪಾಲಕನೊಂದಿಗೆ ಹೋರಾಡಲು ಹಿಂದಿರುಗಬೇಕು; ನಾನು ಆ ಹೋರಾಟವನ್ನು ತೀರಿಸಿದ ಕೂಡಲೆ ಆಹಾ, ಗ್ರೀಕ್ ರಾಜ್ಯದ ದಿವ್ಯಪಾಲಕನು ಎದುರು ಬೀಳುವನು. ಆದರೂ ಸತ್ಯಶಾಸನದಲ್ಲಿ ಲಿಖಿತವಾದದ್ದನ್ನು ಈಗ ನಿನಗೆ ತಿಳಿಸುವೆನು. ಇವರಿಬ್ಬರೊಂದಿಗೆ ಹೋರಾಡುವಲ್ಲಿ ನಿಮ್ಮ ಪಾಲಕನಾದ ಮೀಕಾಯೇಲನ ಹೊರತು ನನಗೆ ಬೆಂಬಲರಾಗತಕ್ಕವರು ಇನ್ನಾರೂ ಇಲ್ಲ ಎಂದನು.>>

21

Copyright information for KanULB